ಪ್ರತಿ ದಿನದಂತೆ ಮನೆಯಿಂದ ಅಫೀಸಿಗೆ ಹೊರಟೆ, ನನ್ನ ಸ್ನೇಹಿತ ನನ್ನನ್ನು ರೇಗಿಸುವಂತೆ ಅದೇ ದಾರಿ, ದಾರಿಯ ಪ್ರತಿಯೊಂದು ಹಳ್ಳ ಕೊಳ್ಳಗಳು, ಏರಿಳಿತಗಳೂ ನನಗೆ ಚಿರಪರಿಚಿತ !
ನಾನು ಮೆಡಿಕಲ್ ಸ್ಟೋರಿನ ಹತ್ತಿರ ಬಂದಾಗ ಕಣ್ಣಿಗೆ ಕಂಡದ್ದು ಒಂದು ನಾಯಿ, ಬಿಳಿಯ ನಾಯಿ, ಆದರೆ ಅದಕ್ಕೆ ಒಡೆಯರಾರು ಇಲ್ಲದಿರುವುದರಿಂದ ಸ್ನಾನಾದಿಗಳು ಲಭ್ಯವಿಲ್ಲ, ಹಾಗಾಗಿ ಅದರ ಮೈ ಬಣ್ಣ ಬಿಳಿಯದಾಗಿದ್ದರು, ಈಗ ಮಾಸಲು ಬಿಳಿಯ ಕಡೆಗೆ ತಿರುಗುತ್ತಿದೆ. ನನ್ನ ಕಣ್ಣಿಗೆ ಅದು ಇತರೇ ಸಾಮಾನ್ಯ ನಾಯಿಯಂತೆ ಕಂಡು ಬಂತು. ಸರಿ ನಾಯಿಯಲ್ಲಿ ವಿಶೇಷತೆಯನ್ನು ಉತ್ತಮ ಮಾನವರಾದ ನಾವು ಕಂಡುಕೊಳ್ಳಲು ಸಾಧ್ಯವೇ, ನಮ್ಮ ಜೀವನ ಹಲವಾರು ಮುಖ್ಯ / ಅಮುಖ್ಯ ಕೆಲಸ ಕಾರ್ಯಗಳಿಂದ ತುಂಬಿ ತುಳುಕುತ್ತಿರುವಾಗ, ಈ ಹುಲು ಪ್ರಾಣಿ, ಅದು ಅಲ್ಲದೆ ಒಡೆಯನಿಲ್ಲದ ಬೀದಿ ನಾಯಿಯ ಮೇಲೆ ಗಮನ ಹರಿಸಲು ಸಮಯವೆಲ್ಲಿದೆ?
ದಾರಿ ಸವೆಸುತ್ತಾ ಮುಂದೆ ಸಾಗಿದೆ, ಆಫೀಸಿಗೆ ಬಂದೆ, ಕೀಲಿ ಮಣೆ ಕುಟ್ಟುವ, ಮೇಜನ್ನು ತಟ್ಟುವ, ತಲೆಯನ್ನು ಬಡಿದುಕೊಳ್ಳುವ ಕೆಲಸವನ್ನು ಶುರು ಮಾಡಿದೆ, ಆಯಿತು ಸಂಜೆಯವರೆವಿಗೂ ನಡೆಯಿತು. ಮತ್ತದೇ ಮನೆಯ ಕಡೆಯ ದಾರಿಸವೆಸುತ್ತಾ (ಸಂಜೆಯ ಸಮಯ, ರಾತ್ರಿ ಅನ್ನಬಹುದು, ಕಾರಣ ಆಗ ಗಂಟೆ ಸಂಜೆಯ ೯:೦೦ ಆಗಿತ್ತು), ನಡೆದೆ. ತಲೆಯಲ್ಲಿ ನಾಳೆಯ ಯೋಚನೆಗಳು, ಬಗೆಹರಿಸಲಾಗದ ಸಮಸ್ಯೆಗಳನ್ನು ಕುರಿತು ಯೋಚನೆಗಳು ಸುತ್ತುತ್ತಿದ್ದವು. ಅದೇ ಮೆಡಿಕಲ್ ಸ್ಟೋರಿನ ಹತ್ತಿರ ಬಂದೆ, ಆದರೆ ಬೆಳಿಗ್ಗೆ ಕಂಡ ನಾಯಿ ಇರಲ್ಲಿಲ್ಲ, ಸರಿ ನಾಯಿ ತಾನೆ ಎಲ್ಲೋ ಸುತ್ತಲು ಹೋಗಿರಬಹುದು ಅನ್ನಿಸಿತು, ಮುಂದಕ್ಕೆ ಹೋರಡಲು ಸಿದ್ದನಾದೆ, ಆಗ ನನ್ನ ಗಮನ ಆ ಮೆಡಿಕಲ್ ಸ್ಟೋರಿನ ಎದುರಿನಲ್ಲಿರುವ ಡ್ರ್ಯೆ-ಕ್ಳೀನರ್ ಅಂಗಡಿಯ ಮುಂಬಾಗದ ಕಡೆ ಹರಿಯಿತು, ಅಲ್ಲಿ ಕಂಡದ್ದೇನು? ಅದೇ ಬಿಳಿ ನಾಯಿ, ಕೈ ಕಾಲುಗಳನ್ನು ಮೈಯೊಳಗೆ ಸೇರಿಸಿಕೊಂಡು ಮಗು ಮಲಗಿದಂತೆ ಮಲಗಿದೆ. ನಿಜ ಹೇಳಬೇಕೆಂದರೆ ನನಗೆ ಈ ರೀತಿ ನಿಶ್ಚಿಂತೆಯಿಂದ ಮಲಗಿರುವ ಪ್ರಾಣಿಗಳನ್ನು, ಮಕ್ಕಳನ್ನು ಕಂಡರೆ ಒಂದು ರೀತಿಯ ಸಂತೋಷವಾಗುತ್ತದೆ. ನನ್ನ ಮನಸ್ಸಿಗೆ ಆಗ ಬಂದದ್ದು ಎಲ್ಲೋ ಓದಿದ ವಾಕ್ಯ ’ಈ ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳು ಉಚಿತವಾಗಿ ಕೆಲಸವಿಲ್ಲದೇ ತಮ್ಮ ತಮ್ಮ ಆಹಾರಗಳನ್ನು ಹುಡುಕಿಕೊಳ್ಳುತ್ತವೆ, ಮಾನವರನ್ನು ಬಿಟ್ಟು !’ ಉಚಿತ ಹೇಗೆ ಎಂಬುದರ ಬಗ್ಗೆ ವಾದ ಮಾಡಬಹುದು, ಸಧ್ಯಕ್ಕೆ ಬೇಡ ಬಿಡಿ.
ಹೀಗೆಯೆ ನನ್ನ ಮತ್ತು ಈ ಬಿಳಿ ನಾಯಿಯ ಭೇಟಿ ದಿನವೂ ಸಾಗುತ್ತಿತ್ತು, ಸುಮಾರು ದಿನಗಳ ಭೇಟಿಗಳ ಬಳಿಕ, ನನ್ನ ಗಮನಕ್ಕೆ ಬಂದ, ವಿಶೇಷವೆನಿಸುವ ಕೆಲವು ಗಮನಿಕೆಗಳು –
೧. ಈ ನಾಯಿ ಬೇರೆಲ್ಲೂ ಸುತ್ತಲೂ ಹೋಗುತ್ತಿರಲ್ಲಿಲ್ಲ.
೨. ಓಮ್ಮೆಯಾದರು ಬೊಗಳಿದ್ದನ್ನು, ನಾನು ಕಾಣಲಿಲ್ಲ, ತನ್ನ ಇತರ ಸ್ನೇಹಿತರು ಮಾತಾಡಿದಾಗಲೂ ಕೂಡ.
೩. ಇತರ ಸ್ನೇಹಿತರೊಡನೆ ಸೇರುತ್ತಿರಲಿಲ್ಲ, ಸ್ನೇಹಿತೆಯರೊಡನೆಯೂ ಕೂಡಾ !
೪. ಅದರ ಪ್ರಪಂಚ ಕೇವಲ ಮೆಡಿಕಲ್ ಸ್ಟೋರಿನ ಹತ್ತಿರದ ಜಾಗಗಳು, ಅಥವಾ ಡ್ರ್ಯೆ-ಕ್ಳೀನರ್ ಅಂಗಡಿಯ ಮುಂಬಾಗದ ಜಾಗಗಳಾಗಿತ್ತೇ ವಿನಹ, ಬೇರೆ ಯಾವ ಸ್ಥಳಗಳಲ್ಲಿ ನಾ ಅದನ್ನು ಕಾಣಲಿಲ್ಲ.
ಸರಿ, ಇನ್ನು ಈ ವಿಚಾರಗಳು ನನ್ನ ತಲೆಯಲ್ಲಿ ಕೂತಮೇಲೆ ಇನ್ನು ಅದರ ನಿಜವಾದ ಕಾರಣವನ್ನು ಹುಡುಕದಿದ್ದರೆ ನನ್ನ ಪಾಡೇನು? ಇರಲಿ ಪ್ರಯತ್ನ ಪಡುವ ಅಂದುಕೊಂಡು ನಾಯಿಯನ್ನೂ ಕೊಂಚ ಸೂಕ್ಶ್ಮವಾಗಿ ಗಮನಿಸಲು ಪ್ರಯತ್ನಿಸಿದೆ, ಅಂದರೆ ಅದರ ಹತ್ತಿರ ಹೋಗುವುದು, ಅದರ ಕೈ, ಕಾಲು, ಕಣ್ಣುಗಳನ್ನು ಪರೀಕ್ಷಿಸುವುದು, ಹೀಗೆ ಕೆಲವು ದಿನಗಳು ಕಳೆದವು. ನನ್ನ ಈ ಅವಲೋಕನದಿಂದ ನಾ ಕಂಡು ಕೊಂಡ ವಿಚಾರಗಳು ನಿಜವಾಗಲು ಬಹಳ ವಿಷಾದಕರವಾಗಿದ್ದವು.
ನನ್ನ ಈ ನಾಯಿ ಸ್ನೇಹಿತನ ವಿಶೇಷ ವರ್ತನೆಗಳಿಗೆ ಮೂಲ ಕಾರಣ, ಅದಕ್ಕೆ ವಯಸ್ಸಾಗಿತ್ತು ಅಲ್ಲದೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ !
ನನಗನ್ನಿಸಿದ್ದು:
೧. ನಮ್ಮ ಶರೀರದ ಬಹು ಮುಖ್ಯ ಅಂಗ ಕಣ್ಣಿಗೆ ತೊಂದರೆಯಾದರೆ, ನಾವು ಎಷ್ಟೇ ಬುದ್ದಿ, ಬಲ, ಸಿರಿವಂತರಾಗಿದ್ದರೂ ನಾವು ಬಲಹೀನರಾಗುತ್ತೇವೆ.
೨. ನಮ್ಮ ಪ್ರಪಂಚರ ಉದ್ದಗಲ ಮೊದಲಿಗಿಂತ ಕಿರಿದಾಗುತ್ತದೆ, ಕೇವಲ ನಮ್ಮ ನಮ್ಮ ಮನದೊಳಗಿನ ಪ್ರಪಂಚ.
೩. ಸಂಪೂರ್ಣವಾಗಲ್ಲದಿದ್ದರು, ಸ್ವಾಭಾವಿಕವಾಗಿ ಅವಲಂಬಿತರಾಗುತ್ತೇವೆ,
೪. ನಮ್ಮ ಆಡಂಭರಗಳು, ಬೆಡಗು ಬಿನ್ನಾಣಗಳು ಕೇವಲ ನೆಪ ಮಾತ್ರವಾಗುತ್ತವೆ,
ಕೊನೆಗೆ:
ನಾ ಮೇಲೆ ತಿಳಿಸಿದ ವಿಚಾರಗಳು, ಋಣಾತ್ಮಕ / ನೆಗೆಟಿವ್ ಎಂದು ನೀವು ತಿಳಿಯಬಾರದು, ಎಕೆಂದರೆ ನಾವು ನಿಜ ಜೀವನದಲ್ಲಿ ಎಷ್ಟೋ ಕುರುಡರು ಏನೇನೋ ಸಾಧನೆಗಳನ್ನು ಮಾಡಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ.
ಆದರೆ ಪ್ರಾಣಿ ವರ್ಗದಲ್ಲಿ ನಮ್ಮ ಮಾನವ ಜಗತ್ತಿನ ವಿಚಾರಗಳು ಸಂಪೂರ್ಣವಾಗಿ ಅನ್ವಯಿಸುವುದಿಲ್ಲ ಅಲ್ಲವೇ?
ಅಲ್ಲದೆ ಯಾರು ಏನೇ ಸಾಧಿಸಿದ್ದರು ನಮ್ಮ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ನಮ್ಮ ಶರೀರದ ಶಕ್ತಿ ಕ್ಷೀಣಿಸಿದಂತೆ, ಅಂಗಗಳು ಬಲಹೀನವಾದಂತೆ ಒಂದು ರೀತಿಯ ಅಶಕ್ತ ಭಾವ, ನಾನು ಅಪ್ರಯೋಜಕನೆನ್ನುವ ಭಾವ ತಲೆ ತೋರಲಾರಂಭಿಸುತ್ತದೆ. ಇದು ನಮ್ಮ ಮನಸ್ಸಿನ ಸಹಜ ಸ್ವಭಾವ.
ಆದ್ದರಿಂದ ನಾವೆಲ್ಲರು ಯಾವಾಗಲು ನಮ್ಮ ಮುಂದಿನ ಬದುಕಿನ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಇಂದಿನ ಕೆಲಸ ಕಾರ್ಯಗಳನ್ನು / ಸ್ನೇಹಿತರನ್ನು / ಶರೀರವನ್ನು - ಮಾಡಿಕೊಳ್ಳಬೇಕು / ನೋಡಿಯೂಕೊಳ್ಳಬೇಕು !
ಆಪತ್ತಿಗಾದವನೇ ನಿಜವಾದ ಸ್ನೇಹಿತ ! ಅವನು ಬೇರೊಬ್ಬನಾಗಿರಬಹುದು ಅಥವಾ ನಮ್ಮ ಶರೀರವೇ
ಅಗಿರಬಹುದು ಅಲ್ಲವೇ !
ಅಗಿರಬಹುದು ಅಲ್ಲವೇ !
I think therefore I am, I am my best friend !